ಪುರಾಣಗಳು - ಸಂಸ್ಕøತದ ಧಾರ್ಮಿಕ ವಾಙ್ಮಯದಲ್ಲಿನ ಒಂದು ಪ್ರಮುಖ ಭಾಗವನ್ನು ಈ ಹೆಸರಿನಿಂದ ಕರೆಯುತ್ತಾರೆ. ಪುರಾಣವೆಂದರೆ ಪುರಾತನವಾದುದು ಎಂಬ ಅರ್ಥ ಇದೆಯಾದರೂ ಹೊಸ ಕಳೆ ಇರುವ ಹಳೆಯ ನಿರೂಪಣೆ (ಪುರ್ಯಾಪಿನವಂ) ಎಂದು ಇದಕ್ಕೆ ಅರ್ಥೈಸಲಾಗಿದೆ. ಪುರಾಣಕ್ಕೆ ಸಂಪ್ರದಾಯದಲ್ಲಿ ಪಂಚಲಕ್ಷಣಗಳನ್ನು ಹೇಳುತ್ತಾರೆ. ಸರ್ಗ (ಜಗತ್ತಿನ ಹುಟ್ಟು), ಪ್ರತಿಸರ್ಗ (ಅವನತಿ, ಸಾವು), ವಂಶ (ಋಷಿ, ದೇವತೆಗಳ ಜೀವಿತ), ಮನ್ವಂತರಗಳು, ಸೂರ್ಯಚಂದ್ರವಂಶೀಯ ರಾಜರ ಚರಿತ್ರೆಗಳು-ಇವೇ ಆ ಐದು ಲಕ್ಷಣಗಳು. ಎಂದರೆ ಪುರಾಣದಲ್ಲಿ ವಿವರಣೆಗೆ ನಿರೂಪಣೆಗೆ ಬರುವ ವಿವರಗಳ ವ್ಯಾಪ್ತಿ ದೊಡ್ಡದು. ವೇದೋಪನಿಷತ್ತುಗಳಲ್ಲಿ ಬರುವ ಗಹನತತ್ತ್ವಗಳನ್ನು ಕಥೆಗಳ ಮೂಲಕ ಪಾಮರಗ್ರಾಹ್ಯವಾಗಿ ಹೇಳುವುದು ಪುರಾಣದ ಪ್ರಮುಖ ಪ್ರಯೋಜನವಾದರೂ ಭಾರತದ ಪ್ರಾಚೀನ ಯುಗದ ಇತಿಹಾಸವನ್ನು ಪುನಃ ನಿರ್ಮಿಸಲು ಪುರಾಣ ತುಂಬ ನೆರವಾಗುತ್ತದೆ. ಅಲಂಕಾರಿಕರು ಶ್ರುತಿಯನ್ನು ಪ್ರಭುಸಮ್ಮಿತವೆಂದೂ ಪುರಾಣೇತಿಹಾಸವನ್ನು ಮಿತ್ರಸಮ್ಮಿತವೆಂದೂ ಕಾವ್ಯವನ್ನು ಕಾಂತಾಸಮ್ಮಿತವೆಂದೂ ನಿರ್ದೇಶಿಸಿದರಷ್ಟೆ. ಇಲ್ಲಿ ಇತಿಹಾಸವೆಂದರೆ ರಾಮಾಯಣ ಮಹಾಭಾರತ, ಪುರಾಣವೆಂದರೆ ಹೀಗೆಯೇ ಹಲವಾರು ವಂಶದವರ ಕಥೆಗಳನ್ನೊಳಗೊಂಡ ಸಾರಸ್ವತ ಸಾಮಗ್ರಿ. ಪುರಾ+ಅನಃ, ಎಂದರೆ ಪ್ರಾಚೀನ ವಿಷಯಗಳನ್ನು ಹೊಂದಿರುವುದು ಪುರಾಣ. ಇದು ಶತಕೋಟಿ ಪ್ರವಿಸ್ತರವಾದದ್ದೆಂದು ಕಲ್ಪನೆ. ಆದರೆ ವ್ಯವಹಾರದಲ್ಲಿ ಅಷ್ಟಾದಶ ಮಹಾಪುರಾಣಗಳನ್ನು ಹೇಳುತ್ತಾರೆ. ಬ್ರಹ್ಮ, ಪದ್ಮ, ವಿಷ್ಣು, ವಾಯು, ಭಾಗವತ, ನಾರದ, ಅಗ್ನಿ, ಭವಿಷ್ಯತ್, ಬ್ರಹ್ಮವೈವರ್ತ, ಲಿಂಗ, ಸ್ಕಾಂದ (2), ವಾರಾಹ, ವಾಮನ, ಕೂರ್ಮ, ಮತ್ಸ್ಯ, ಗರುಡ, ಬ್ರಹ್ಮಾಂಡ ಪುರಾಣಗಳೇ ಹದಿನೆಂಟು. ಒಂದೊಂದರಲ್ಲೂ ಭಾರತದ ಒಂದೊಂದು ಕಾಲದ, ಒಂದೊಂದು ಪ್ರದೇಶದ ವಿವರಗಳಿವೆ. ಐತಿಹಾಸಿಕವಾಗಿ ಪ್ರಸಿದ್ಧವಾದ ರಾಜವಂಶಗಳ ರಾಜರ ಅವರ ವಿಜಯ ಪರಾಭವಗಳ ಹಲವಾರು ವಿವರಗಳೂ ಪ್ರಸಕ್ತವಾಗಿವೆ. ಶಾಸನಗಳು ಹಾಗೂ ಅನ್ಯಗ್ರಂಥಗಳಲ್ಲಿ ಬರುವ ಪ್ರಸ್ತಾಪಗಳ ಪರಿಶೀಲನೆಯಿಂದ ಪುರಾಣದ ನಿರೂಪಣೆ ಇತಿಹಾಸದ ಅಧ್ಯಯನಕ್ಕೆ ಸಹಕಾರಿಯಾಗುವುದೆಂಬ ವಿಶ್ವಾಸ ಬರುತ್ತದೆ. ಭಾರತೀಯರಲ್ಲಿ ಇತಿಹಾಸದ ದೃಷ್ಟಿಯಿಲ್ಲವೆಂಬ ಅಪವಾದವಿದೆ. ಅಸ್ಪಷ್ಟವಾಗಿಯೇ ಉಳಿದಿದೆ. ಈ ಅಸ್ಪಷ್ಟತೆಯನ್ನು ಪರಿಹರಿಸಲು ಪುರಾಣಗಳು ನೆರವಾಗುತ್ತವೆ. 

	ಪುರಾಣ ಪ್ರಮಖವಾಗಿ ಮನುಷ್ಯರ ಚರಿತ್ರೆಯಲ್ಲದಿದ್ದರೂ ಪ್ರಾಸಂಗಿವಾಗಿ ಒಂದು ಕಾಲಕ್ಕೆ ಪ್ರಸಿದ್ಧರಾಗಿದ್ದ ನೂರಾರು ಮನುಷ್ಯರ ಪ್ರಸ್ತಾಪ ಅಲ್ಲಿ ಬರುತ್ತದೆ. ಶುಂಗ ನಂದ ಮೌರ್ಯ ಗುಪ್ತವಂಶಗಳ ರಾಜರ ಪ್ರಸ್ತಾಪ ವಿಸ್ತಾರವಾಗಿಯೇ ಬರುತ್ತದೆ. ಇಕ್ಷ್ವಾಕು ಪರೂರವ ವಂಶದವರ ಕಥೆಗಳು ಅರ್ವಾಚೀನಯುಗದವರೆಗೂ ಬರುತ್ತವೆ. ಮುಖ್ಯವಾಗಿ ಭವಿಷ್ಯತ್ ಪುರಾಣದಲ್ಲಿ ಚಂದ್ರಗುಪ್ತ ವಿಕ್ರಮಾದಿತ್ಯ, ಕೃಷ್ಣ ಪಾಣಿನಿ ಪತಂಜಲಿ ಕಬೀರದಾಸ ಕೃಷ್ಣಚೈತನ್ಯ-ಇವರ ಪ್ರಸ್ತಾಪವೂ ಸ್ವಾರಸ್ಯವಾಗಿ ಬಂದಿದೆ. ಅವರವರ ಅವತಾರಗಳನ್ನು ಅಂಶನಿರ್ದೇಶನಗಳನ್ನೂ ಸವಿಸ್ತಾರವಾಗಿ ಮಾಡಲಾಗಿದೆ. ಅಷ್ಟೇ ಅಲ್ಲ, ಮಹಮದೀಯರ ಪ್ರಭಾವ ಆಂಗ್ಲ ಜನರ ಆಡಳಿತ ಇವೂ ಕೂಡ ಇಲ್ಲಿ ಅಡಗಿವೆ. ಬ್ರಹ್ಮಾಂಡ ಪುರಾಣದಲ್ಲಿ ಶಾತವಾಹನ, ಇಕ್ಷ್ವಾಕು ಮೊದಲಾದ ಆಂಧ್ರ ರಾಜವಂಶದವರ ಪ್ರಸ್ತಾಪ ಬಹುವಾಗಿ ಬಂದಿದೆ. ಈ ರಾಜರ ವಿಚಾರವಾಗಿ ವಿವರಗಳನ್ನು ಹೇಳುತ್ತ ಆಯಾ ಕಾಲದ ರಾಜಕೀಯ ಪರಿಸ್ಥಿತಿಗಳ ಬಗ್ಗೆ ವಿವರಗಳನ್ನು ಸಹ ಕೊಡಲಾಗಿದೆ. 

	ರಾಜಕೀಯ ಪರಿಸ್ಥಿತಿ ಮಾತ್ರವಲ್ಲ, ಆ ಕಾಲಗಳ ಧಾರ್ಮಿಕ ಪರಿಸ್ಥಿತಿಯೂ ಅಲ್ಲಿ ಸ್ಪಷ್ಟ. ಶೈವ ವೈಷ್ಣವ ಸಂಪ್ರದಾಯಗಳ ತುಮುಲ ಭಕ್ತರ ಪ್ರಬೋಧಕ ಕೃತಿಗಳು ದೇವಾಲಯಗಳ ಮಹಾತ್ಮೆ, ವ್ರತಗಳ ವಿವರಗಳು, ಕ್ಷೇತ್ರಾಟನ-ಮುಂತಾದುವು ಕಾಣಿಸುತ್ತವೆ. ಎಲ್ಲ ಪುರಾಣಗಳಲ್ಲಿಯೂ ಹಲವಾರು ಪುಣ್ಯ ಕ್ಷೇತ್ರಗಳ ಮಹಾತ್ಮೆ ಒದಗಿಬರುತ್ತದೆ. ಈ ವಿಚಾರದಲ್ಲಿ ಸ್ಕಾಂದ ಪುರಾಣ ಪ್ರಮುಖವಾದುದು. ಭಾರತ ಸಂಸ್ಕøತಿಯನ್ನು ನಿಲ್ಲಿಸಿರುವ, ವಿವಿಧ ಭಾಗಗಳ ನಡುವೆ ಸೇತುವೆಯನ್ನು ನಿರ್ಮಿಸಿರುವ ಸಾವಿರಾರು ಪುಣ್ಯ ಕ್ಷೇತ್ರಗಳನ್ನು ಭೌಗೋಳಿಕ, ಚಾರಿತ್ರಿಕ ವಿವರಗಳೊಂದಿಗೆ ಈ ಪುರಾಣ ವಿವರಿಸುತ್ತದೆ. ಯಾವ ಸಣ್ಣ ದೇವಾಲಯಕ್ಕೂ ಪುರಾಣಾಂತರ್ಗವಾದ ಸ್ಥಳ ಮಹಾತ್ಮೆ ಇಲ್ಲದೇ ಇಲ್ಲ. ಎಲ್ಲ ತೀರ್ಥಕ್ಷೇತ್ರ ಶೈಲ ಸಿಂಧು ದ್ವೀಪಗಳೂ ಪುರಾಣದ ದೃಷ್ಟಿಯಲ್ಲಿ ಪವಿತ್ರವೇ. ಇದರಿಂದಾಗಿ ಭಾರತೀಯ ಸಂಸ್ಕøತಿ ಏಕಸೂತ್ರದಿಂದ ಹರಡಿತು.

	ಸಾಮಾಜಿಕ ಪರಿಸ್ಥಿತಿಯೂ ಸಮಾಜದಲ್ಲಿ ಸಂಪರ್ಕಗಳಿಂದ ಒದಗಿದ ಸಂಕರವೂ ಕಾಲಕಾಲಕ್ಕೆ ಒದಗಿಬಂದ ಧರ್ಮಶಾಸ್ತ್ರಗಳೂ ಪುರಾಣದ ಪರಿಶೀಲನೆಯಿಂದ ಸ್ಪಷ್ಟವಾಗುತ್ತವೆ. ಚಾತುರ್ವಣ್ರ್ಯದ ವ್ಯವಸ್ಥೆ ರಾಜಧರ್ಮ ವರ್ಣಾಶ್ರಮಧರ್ಮ ಸಾಮಾನ್ಯ ಧರ್ಮ ಅನುಕೂಲಸಿಂಧು ಸಮಯಸಿಂಧು ದೇಶಾಚಾರ ಕುಲಾಚಾರಗಳು ವರ್ಣಬಾಹಿರರಾದ ಜನರೊಂದಿಗೆ ಸಂಪರ್ಕ ಕ್ರಮ ವಿವಾಹ ಪದ್ಧತಿಗಳು ಇವು ಇಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಮನೆಯಲ್ಲಿ ಮಾಡಬೇಕಾದ ಸಂಸ್ಕಾರಗಳು ನಿತ್ಯನೈಮಿತ್ತಿಕ ಕರ್ಮಗಳು, ಹಬ್ಬಹರಿದಿನಗಳು, ವ್ರತಗಳು ಇವುಗಳಲ್ಲಿ ಸಮಾಜ ಸಂಘಟನೆಯ ದೃಷ್ಟಿಯಿದೆಯೆಂಬುದು ಇಲ್ಲಿ ತಿಳಿದುಬರುತ್ತದೆ. ಪುರಾಣವಿಲ್ಲದಿದ್ದರೆ ಕ್ರಿಸ್ತಯುಗದ ಆರಂಭ ಕಾಲದಲ್ಲಿ ಆದಿವಾಸಿ ಜನರ (ಬಾಹ್ಲೀಕ, ಅಭಿರ, ವೃಷ್ಣಿ ಇತ್ಯಾದಿ ಆಂಧ್ರ ನಿಷಾದ ಇತ್ಯಾದಿ) ಹೆಸರುಗಳು ಸಹ ಇಂದು ಉಳಿದು ಬರುತ್ತಿರಲಿಲ್ಲ. ಗಾರ್ಹಸ್ಥ ಜೀವನದ ಸ್ವಾಸ್ಥ್ಯಕ್ಕೆ ಅಗತ್ಯವಾದ ಕಟ್ಟುಪಾಡು ಪುರಾಣಗಳಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಈ ಕಾಲದಲ್ಲಿ ಪ್ರಚಲಿತವಾಗಿದ್ದ ಸಂಪ್ರದಾಯಗಳು ಸ್ವಾರಸ್ಯವಾಗಿವೆ. ಇರಬೇಕಾದ ಧರ್ಮಸೂಕ್ಷ್ಮ, ಸ್ವಾಮಿ-ಭ್ರತ್ಯರ ಸಂಬಂಧ, ರಾಜ-ಪ್ರಜೆಗಳ ಸಂಬಂಧ. ಮಕ್ಕಳು ತಂದೆತಾಯಿಯರ ಸಂಬಂಧ ಇವೂ ಪುರಾಣಗಳಲ್ಲಿ ಪ್ರಾಸಂಗಿಕವಾಗಿ ಬರುತ್ತವೆ. ಮತ್ಸ್ಯ ಪುರಾಣದಲ್ಲಿ ಬರುವ ರಾಜಧರ್ಮ ಪ್ರಕರಣ ಪ್ರಸಿದ್ಧವಾದುದು.

	ಪುರಾಣದ ವ್ಯಾಪ್ತಿಯಲ್ಲೇ ಕಲೆಯ ಬಗ್ಗೆ ವಿವರಗಳು ಸೇರಿವೆ. ಅಗ್ನಿಪುರಾಣದಲ್ಲಿ ವಾಸ್ತುಶಿಲ್ಪ, ವರ್ಣಚಿತ್ರ, ನಾಟ್ಯಗಳ ಸವಿಸ್ತಾರ ಪ್ರಸ್ತಾಪವಿದೆ. ವಾಸ್ತುಶಿಲ್ಪ ಸಂರಕ್ಷಣೆಯ ಅಗತ್ಯವನ್ನು ಮತ್ಸ್ಯಪುರಾಣ ಒತ್ತಿ ಹೇಳುತ್ತದೆ. ಅಗ್ನಿಪುರಾಣದಲ್ಲೇ ಶಾಸ್ತ್ರ ವಿಚಾರವೂ ಪ್ರಸಕ್ತವಾಗುತ್ತದೆ. ಧನುರ್ವೇದ, ಆಯುರ್ವೇದ, ಛಂದೋಶಾಸ್ತ್ರ, ಅಲಂಕಾರ, `ಅಭಿಧಾಯಃ ಪ್ರಧಾನತ್ವಾತ್ ಶಾಸ್ತ್ರ ಮತ್ತು ಇತಿಹಾಸಗಳಿಂದ ಕಾವ್ಯ ಭಿನ್ನವಾದುದೆಂದು ಇಲ್ಲಿನ ವಾದ.

	ಆಯುರ್ವೇದ ತುಂಬ ಹಿಂದಿನ ಕಾಲದಿಂದ ವಿಶಿಷ್ಟವಾದ ಪ್ರಾಯೋಗಿಕ ಶಾಸ್ತ್ರವೆಂದು ಪರಿಗಣಿತವಾಗಿದ್ದರೂ ಸ್ವತಂತ್ರ ಗ್ರಂಥಗಳ ಅಭಾವದಿಂದ ಅದು ಗಹನವಾಗಿದೆ. ಬಹುಶಃ ಪ್ರಣಷ್ಟವಾಗಿದೆ. ಆ ಶಾಸ್ತ್ರದ ಸಮಗ್ರ ಚಿತ್ರ ಇಂದು ದೊರೆಯದು. ಅರ್ಧಮರ್ಧವಾದರೂ ಆಯುರ್ವೇದದ ಇತಿಹಾಸವನ್ನು ಪುನರ್ನಿರ್ಮಾಣ ಮಾಡಲು ಪುರಾಣ ನೆರವಾಗುತ್ತದೆ. ಬ್ರಹ್ಮಾಂಡಪುರಾಣದಲ್ಲಿ ಕಾಶಿರಾಜನಿಂದ ಆಯುರ್ವೇದ ಶಾಸ್ತ್ರಕ್ಕೆ ಒದಗಿದ ಸಹಾಯ ತಿಳಿದುಬರುತ್ತದೆ. ಅಗ್ನಿಪುರಾಣದಲ್ಲಿ ಅಶ್ವಚಿಕಿತ್ಸೆ, ಹಸ್ತಿಚಿಕಿತ್ಸೆ, ಸರ್ಪದಷ್ಟ ಮಂತ್ರಚಿಕಿತ್ಸೆ, ಬಾಲಗ್ರಹ ಚಿಕಿತ್ಸೆ ಮುಂತಾದ ಹಲವಾರು ಸ್ವಾರಸ್ಯವಾದ ವಿವರಗಳಿಗೆ ಮತ್ಸ್ಯಪುರಾಣ ಔಷಧೀರಕ್ಷಣದ ಬಗೆ, ವಿಷವನ್ನು ಪರಿಹರಿಸಿಕೊಳ್ಳುವ ಉಪಾಯ ಮುಂತಾದುವನ್ನು ವಿವರಿಸುತ್ತದೆ. ಹೀಗೆಯೇ ನಾರದಪುರಾಣದಲ್ಲಿ ಜ್ಯೋತಿಷ್ಯದ ಬಗ್ಗೆ ಹಲವಾರು ಸ್ವಾರಸ್ಯವಾದ ವಿವರಗಳಿವೆ. 
(ನೋಡಿ- ಅಷ್ಟಾದಶ-ಉಪಪುರಾಣಗಳು)
(ನೋಡಿ- ಅಷ್ಟಾದಶಪುರಾಣಗಳು)
(ಎಸ್.ಕೆ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ